Friday 26 September, 2008

ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ ಭೃಂಗದ ಬೆನ್ನೇರಿ

ಇದು ದ. ರಾ. ಬೇಂದ್ರೆಯವರ ಒಂದು ಕವನದ ಸಾಲು. ಸಂಪೂರ್ಣ ಕವನದ ಕೊಂಡಿ ಇಲ್ಲಿದೆ.
ದೂರದರ್ಶನದಲ್ಲಿ ಕಂಡು ಕೇಳಿದ ಒಂದು ಸಂಕ್ಷಿಪ್ತ ಪಕ್ಷಿನೋಟ:

ಬದುಕಿನ ಪೂರ್ತಿ ಗೋಳು, ಕಷ್ಟ-ಕಾರ್ಪಣ್ಯಗಳು ತುಂಬಿರತ್ತೆ. ಆಗಲೋ ಈಗಲೋ ಮಧ್ಯದಲ್ಲಿ ಒಂದೆರಡು ಕ್ಷಣಗಳಲ್ಲಿ ನಲಿವು ಹೊರಹೊಮ್ಮುತ್ತೆ. ಆ ಹೊರಹೊಮ್ಮಿದ ನಲಿವು ಮಂದಹಾಸಕ್ಕೆ ಕಾರಣವಾಗುತ್ತೆ. ಎಲ್ಲಕ್ಕಿಂತ ಮಿಗಿಲಾಗಿ, ಆ ಮಂದಹಾಸ ಮರೀಚಿಕೆಯಂತೆ. ಅದನ್ನು ಹುಡುಕಿ ಹೋದರೇ ಸಿಗದು. ತಾನಾಗೇ ನಮ್ಮನ್ನು ಅರಸಿ ಬರಬೇಕು.

Sunday 3 February, 2008

ಹೃದಯ ಚಿರಂಜೀವಿಯಾದಾಗ...

ಈಗ್ಗೆ ಸುಮಾರು ಒಂದೆರಡು ವಾರಗಳ ಹಿಂದೆ ಪತ್ರಿಕೆಗಳಲ್ಲಿ ಕಂಡುಬಂದ ವಿಷಯ: ಸಾವನ್ನಪ್ಪಿದ ಹೃದಯದ ಪುನರುತ್ಥಾನ.
ಇದರ ಕೊಂಡಿ ಇಲ್ಲಿದೆ .
ಕುತೂಹಲಕಾರಿಯಾದಂತಹ ವಿಷಯವಾದ್ದರಿಂದ ಓದಲಾರಂಭಿಸಿದೆ. ಪ್ರಯೋಗಕ್ಕಾಗಿ ಬಳಸಲಾಗಿದ್ದ ಮೂಷಿಕಗಳನ್ನು ಸಾಯಿಸಿ, ಅವುಗಳ ಹೃದಯದ ಒಳ ಖಂಡಗಳನ್ನು ಬಿಸಾಡಿ, ಹೊರಗಿನ ಕವಚಕ್ಕೆ ನವಜಾತ ಮೂಷಿಕಗಳ ಹೃದಯದ ಜೀವಕೋಶಗಳಿಂದ ತುಂಬಿಸಿ ವೀಕ್ಷಣೆಯಲ್ಲಿ ಇಟ್ಟರಂತೆ. ಕೆಲವೇ ದಿನಗಳಲ್ಲಿ ಆ ಜೀವಕೋಶಗಳು ಬೆಳೆದು ಹೆಚ್ಚಾಗಿ ಹೃದಯಕ್ಕೆ ಜೀವ ತುಂಬಿ ಮಿಡಿಯಲಾರಂಭಿಸಿದವಂತೆ. ಇದು ಪ್ರಕೃತಿಯ ವಿಸ್ಮಯವಲ್ಲದೇ ಮತ್ತೇನು?
ಈ ಪ್ರಯೋಗವನ್ನೀಗ ವರಾಹಗಳಲ್ಲೂ ಸಫಲವಾಗಿ ಪರೀಕ್ಷಿಸಲಾಗಿದೆಯಂತೆ. ಇಷ್ಟೆಲ್ಲ ಆದಮೇಲೆ ಅವರು ಸಾರ್ವಜನಿಕವಾಗಿ ಇದರ ಘೋಷಸಿದ್ದು. ವೈದ್ಯರು ಈಗ ಇದನ್ನು ಮನುಷ್ಯರಲ್ಲೂ ಪರೀಕ್ಷಿಸಲು ಆಲೋಚಿಸುತ್ತಿದ್ದಾರೆ ಅಂತ ಸುದ್ದಿ. ಇದರ ಪರಿಣಾಮಗಳ ಬಗ್ಗೆ ಯೋಚನೆ ಮಾಡಿದೆ.
೧. ಇದೇ ಮಾರ್ಗೋಪಾಯಗಳನ್ನು ಬಳಸಿಕೊಂಡು ಈಗ ಮನುಷ್ಯನ ದೇಹದಲ್ಲಿರುವ ಬೇರೆ ಬೇರೆ ಅಂಗಾಂಗಳನ್ನೂ ಪುನಶ್ಚೇತನಗೊಳಿಸಬಹುದಲ್ಲವೇ? ಉದಾಹರಣೆಗೆ ಹೃದಯವಲ್ಲದೇ ಪಿತ್ತಕೋಶವಾಗಲಿ, ಶ್ವಾಸಕೋಶವಾಗಲಿ ರೆಪೇರಿ ಮಾಡಬಹುದು ಅಂತಾಯ್ತಲ್ವಾ? ಕಾಮಾಲೆ ಖಾಯಿಲೆ ಬಂದು ಪಿತ್ತಕೋಶ ಸಂಪೂರ್ಣವಾಗಿ ಹಾಳಾದ ಪರಿಸ್ಥಿತಿಯಲ್ಲಿ ಈ ಉಪಾಯ ಸಮಯೋಚಿತ. ಇದೆಲ್ಲ ಒಳ್ಳೆಯದೇ. ಮನುಕುಲದ ಉದ್ಧಾರಕ್ಕೆಂದು ಬಳಸಿದರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಯೋಚನೆ ಮಾಡಿ. ಮನುಷ್ಯನಿಗಿರುವ ಮನಸ್ಸು ಮರ್ಕಟದಂತೆ. ಕೂದಲು ಬೆಳ್ಳಗಾಯಿತು ಅನ್ನೋ ಪಿಳ್ಳೆ ನೆವದಿಂದಲೇ ತಲೆ ಕೆಡಿಸಿಕೊಂಡು ಅದಕ್ಕೆ ಬಣ್ಣ ಹಚ್ಚಿ ಯೌವನವನ್ನ ಮೆರೀತಾನೆ. ತಾನು ಅಜರಾಮರವಾಗಬೇಕೆಂಬ ಹೆಬ್ಬಯಕೆ ಆತನದು. ಈ ಪ್ರಯೋಗ ಅವನ ಮನಸ್ಸಿನಲ್ಲಿ ದುರಾಲೋಚನೆಗಳನ್ನು ತುಂಬುವುದಿಲ್ಲವೇ? ನಾನೇಕೆ ನನ್ನ ಹೃದಯವನ್ನು ರೆಪೇರಿ ಮಾಡಿಕೊಂಡು ಮತ್ತೆ ೨೦ - ೩೦ ಸಂವತ್ಸರಗಳು ಬದುಕಬಾರದು ಅನ್ನೋ ಯೋಚನೆ ಬರೋದಿಲ್ಲವೇ? ಶಾಪಗ್ರಸ್ಥ ಯಯಾತಿ ತನ್ನ ವ್ರುದ್ಧಾಪ್ಯವನ್ನು ತನ್ನ ಮಗನಿಗೆ ಕೊಟ್ಟು ಅವನ ಯೌವನವನ್ನು ತಾನು ಅನುಭವಿಸಿದ ಕಥೆ ನಮ್ಮೆಲ್ಲರಿಗೂ ಚಿರಪರಿಚಿತ. ಈಗಿನ ಮಾನವ ಯಯಾತಿಯಂತೆ ಆಗುವುದಿಲ್ಲವೆಂಬ ಖಾತ್ರಿಯಾದರೂ ಏನು?
೨. ಸ್ವಾರಸ್ಯಕರವೆಂಬಂತೆ ಒನ್ನೊಂದು ವಿಷಯ ಹೊಳೆಯಿತು. ಮನುಷ್ಯನಲ್ಲಿ ಇಂತಹ ಪುನರ್ಜೀವ ಪಡೆಯುವ ಶಕ್ತಿ ಬಂದಾಗ ಅವನ ಜಾತಕವೂ ಬದಲಾಗುತ್ತದೆಯೋ ಹೇಗೆ? ಎಂದೋ ಮೊದಲ ಬಾರಿ ಹುಟ್ಟಿದ ದಿನ, ನಕ್ಷತ್ರಗಳಿಗನುಸಾರವಾಗಿ ಅವನ ಭಾಗ್ಯ, ಕರ್ಮ, ಪ್ರಾರಬ್ಧ ಮೋಕ್ಷಗಳನ್ನು ಕೊಂಡು ಬಂದಿರುತ್ತಾನಲ್ಲವೇ? ಹೀಗೆ ಪುನರ್ಜನ್ಮ ಪಡೆದ ನಂತರ ಅವನ ಪ್ರಾರಬ್ಧವಾಗಲಿ ಅವನ ಕರ್ಮವಾಗಲಿ ಬದಲಾಗುತ್ತದೆಯೋ? ನನಗಂತೂ ಇದರ ಉತ್ತರ ತಿಳಿದಿಲ್ಲ. ಓದುಗರಿಗೆ ತಿಳಿದಿದ್ದಲ್ಲಿ ನನಗೂ ಸ್ವಲ್ಪ ತಿಳಿಹೇಳಿ.

Sunday 18 March, 2007

ತನುವು ನಿನ್ನದು ಮನವು ನಿನ್ನದು

ರಚನೆ: ರಾಷ್ಟ್ರಕವಿ ಕುವೆಂಪು

ತನುವು ನಿನ್ನದು ಮನವು ನಿನ್ನದು
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೇ ನನ್ನದು
ತನುವು ನಿನ್ನದು ಮನವು ನಿನ್ನದು


ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು
ನನ್ನ ಮರಣದ ಮರಣವು

ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ
ನೀನೆ ಮಾಯಾ ಮೋಹ ಶಕ್ತಿಯು
ಎನ್ನ ಜೀವನ ಮುಕ್ತಿಯು
ಎನ್ನ ಜೀವನ ಮುಕ್ತಿಯು

ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು

ತನುವು ನಿನ್ನದು ತನುವು ನಿನ್ನದು ತನುವು ನಿನ್ನದು ಮನವು ನಿನ್ನದು

ಅರ್ಪಣೆಯ ಬಗ್ಗೆ ಇದಕ್ಕಿಂತ ಸೊಗಸಾದ ಕವಿತೆ ಮತ್ತೊಂದು ಇರಲಾರದೇನೋ. ಇಲ್ಲಿ ಕಾಣಸಿಗುವುದು ಎರಡು ಅಂಶಗಳು -
ತನ್ನ ಜೀವನದ ಅಸ್ತಿತ್ವವೇ ನಿನ್ನಿಂದ, ತನ್ನ ಬಾಳ್ವೆಯೇ ನಿನ್ನಿಂದ ಎನ್ನುವುದನ್ನು ಅರಿತುಕೊಳ್ಳುವುದು ಒಂದು
ಮತ್ತೊಂದು, ಆ ಅರಿವನ್ನು ಸಾರಿ ಹೇಳಿವುದು

ಆ ಅರಿವು ಮೂಡಿದಾಗ ಮನದೊಳಗೆ ಆಗುವ ಸಂತೃಪ್ತಿ ಇನ್ನೊಂದೆಡೆ. ತನ್ನನ್ನು ತಾನು ಅರ್ಪಿಸಿಕೊಂಡಾಗಲೇ ತನ್ನ ಜೀವನ ಪರಿಪೂರ್ಣ ಎಂಬ ಮನೋಭಾವ ಕವಿಯದ್ದು.

Monday 12 March, 2007

ಹೊಟ್ಟೆ ಪಾಡೋ ದುರಾಸೆಯೋ!

ದಿನಾಂಕ: ೯, ಮಾರ್ಚ್ ತಿಂಗಳು, ಸಂವತ್ಸರ ೨೦೦೭
ಸಮಯ: ೫.೩೦ ಬೆಳಗಿನ ಜಾವ
ಸ್ಥಳ: ಚಿಕಾಗೋ ವಿಮಾನ ನಿಲ್ದಾಣದ ಆಗಮನ ಆವರಣ

ಚಿಕಾಗೋ ಮಹಾನಗರಕ್ಕೂ ನನಗೂ ಅದಾವುದೋ ನಂಟಿರಬೇಕು. ಇಲ್ಲದಿದ್ದರೆ ಎರಡೂವರೆ ವರ್ಷದಲ್ಲಿ ನಾಲ್ಕು ಬಾರಿ ಈ 'windy city' ಗೆ ಬರುತ್ತಿರಲಿಲ್ಲ. O'Hare ವಿಮಾನನಿಲ್ದಾಣ, ಚಿಕಾಗೋ downtown ಮತ್ತು ಮಹಾನಗರದ ಉತ್ತರ ದಿಕ್ಕಿನಲ್ಲಿರುವ libertyville ಎಂಬ ಹಳ್ಳಿ ನನಗೆ ಚಿರಪರಿಚಿತ.
ಅಂದಿನ ದಿನ ಬೆಳಿಗ್ಗೆ, ಯಾವುದೇ ಸುರಕ್ಶ್ಷಾ ತಪಾಸಣೆಯಿಲ್ಲದೇ ವಿಮಾನ ನಿಲ್ದಾಣದ ಹೊರಬಂದೆ.
ತೊಟ್ಟಿದ್ದ half-sleeve ಅಂಗಿ ಹಾಗು sleeveless ಜಾಕೆಟ್ ಆ ಚಳಿಯಿಂದ ನನ್ನನ್ನು ರಕ್ಷಿಸಲು ವಿಫಲವಾದವು. ನಾನು ನಡುಗಲಾರಂಭಿಸಿದೆ. Arrival terminal ನ ಉದ್ದಗಲಕ್ಕೂ ಕಣ್ಣು ಹಾಯಿಸಿದೆ. ಸ್ಮಶಾನ ಮೌನ ಆವರಿಸಿದಂತಿತ್ತು. ನಾಲ್ಕೈದು ನಿಮಿಷಗಳು ಕಾದ ಬಳಿಕ, ಒಂದು mid-size ಕಾರ್ ಬರುತ್ತಿದ್ದುದು ಕಾಣಿಸಿತು. ಮೇಲೆ taxi ಚಿಹ್ನೆಯಿಲ್ಲದಿದ್ದುದು ನನ್ನಲ್ಲಿ ಸಂಶಯ ಮೂಡಿಸಿತು. ಕಾರ್ ಹತ್ತಿರ ಬರುತ್ತಿದ್ದಂತೆ ನಾನು ಯೋಚಿಲಾರಂಭಿಸಿದೆ. ಈ ಕಾರ್ taxi ಯೇ ಆಗಿರಬೇಕು - ವಿಚಾರಿಸೋಣ ಎಂದು ನಿರ್ಧರಿಸಿ ಕೈಯನ್ನು ಚಾಚಿದೆ. ಕಾರ್ ನಿಂತಿತು.

ಚಾಲಕ ನನ್ನುನ್ನ್ನು ಪ್ರಶ್ನಿಸಿದ - ಎಲ್ಲಿಗೆ.
ನನಗೆ ಇನ್ನೂ ಖಾತರಿಯಾಗಲಿಲ್ಲ. 'You gonna fetch me a ride?'.
ಚಾಲಕ ಉತ್ತರಿಸಿದ 'sure thingy, where do you wanna go?'.
ನಾನು: 'Libertyville'.
ಚಾಲಕ: 'C'mon in!'.
ನಾನು: 'Why don't you help me out with my stuff out here?'
ಚಾಲಕ ಹೊರಗಿಳಿದು ಬಂದು ನನ್ನ suitcaseಗಳನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿದ. ಇಬ್ಬರೂ ಒಳಗೆ ಕುಳಿತೆವು.

ಒಂದೆರಡು ಮೈಲಿಗಳ ದೂರ ಕ್ರಮಿಸುವ ವೇಳೆಗೆ ನನಗೆ ಹೊಳೆಯಿತು.
ಗಡುಸು ಧ್ವನಿಯಲ್ಲಿ ಕೇಳಿದೆ.
'Why haven't you turned on the meter?'
'Errr.. yes, lemme do it now for you mister!'
ಅವನ ಆಂಗ್ಲ ಭಾಷೆಯ ಧಾಟಿಯನ್ನು ಗಮನಿಸಿದಾಗ ತಿಳಿದದ್ದು - ಅವನು ಮಧ್ಯಪ್ರಾಚ್ಯದವನಿರಬೇಕೆಂದು (middle east).

ದಾರಿಯುದ್ದಕ್ಕೂ ನನ್ನನ್ನು ಕೇಳಿದ - ಪ್ರಶ್ನೆಗಳ ಸುರಿಮಳೆ - ಎಲ್ಲಿಂದ ಬಂದೆ, ಎಲ್ಲಿ ನಿನ್ನ ಕೆಲಸ, ಎಷ್ಟು ದಿನಗಳಿಗಾಗಿ ಬಂದಿದ್ದೀಯೆ, ಇದು ಇಲ್ಲಿಗೆ ನಿನ್ನ ಮೊದಲನೆಯ ಬಾರಿಯೇ - ಇನ್ನೂ ಹಲವಾರು.

ಅವನಿಗೆ Libertyville ಹಾಗು ಸುತ್ತಮುತ್ತಲಿನ ಜಾಗ ಚೆನ್ನಾಗಿಯೇ ಗೊತ್ತಿರಬೇಕು. ನಕ್ಷೆಯ ಸಹಾಯವಿಲ್ಲದೇ ನನ್ನನ್ನು ಕರೆತಂದ. ಹೋಟೆಲ್ ಮುಂದೆ ಬಂದು ಕಾರ್ ನಿಂತಿತು. ಅವನು ತನ್ನ fare list book ತೆಗೆದ. ಅದರಲ್ಲಿ ನಿಗದಿ ಪಡಿಸಿದ್ದ ಮೊತ್ತ - ೧೩೮ ಡಾಲರ್. ನಾನು ಚಕಿತನಾದೆ. ಹಿಂದೆಂದೂ ಇಷ್ಟು ದೊಡ್ಡ ಮೊತ್ತ ಕೊಟ್ಟ ನೆನಪಿರಲಿಲ್ಲ. ತಕ್ಷಣ ಕಾಣಿಸಿತು. ಆ ಚಾಲಕ ತನ್ನ ಹೆಬ್ಬೆರಳಿನಿಂದ ಪುಟದ ಮೇಲೆ ಬರೆದಿದ್ದ ಶೀರ್ಷಿಕೆಯನ್ನು ಮುಚ್ಚಿದ್ದ. ಆಗ ನನಗೆ ಅರ್ಥವಾಯಿತು. ಇದು Midway to Other destinations ಪುಟವೆಂದು. ನಾನು ಮತ್ತಷ್ಟು ಗಡಸು ಧ್ವನಿಯಲ್ಲಿ ಅವನನ್ನು ಗದರಿಸಿದೆ.
'This is from the midway mister! Are you trying to fool me, huh?'
ಐವತ್ತರ ಹರೆಯದ ಈ ಚಾಲಕ ನನ್ನನ್ನು ಮೋಸ ಮಾಡುತ್ತಿದ್ದುದು ನನಗೆ ಸ್ಪಷ್ಟವಾಗಿ ಗೋಚರವಾಯಿತು.
ಚಾಲಕ: 'Oh!! I am so sorry!! It must have been a mistake!! I had taken this sheet out to refer to the map and the directions. Sorry Sir, lemme pull out the correct sheet! Just hang on for a second, will you?'
ನಾನು: 'u better!'
ಚಾಲಕ ಬೇರೊಂದು ಪುಟವನ್ನು ತೆಗೆದು ಅದರಲ್ಲಿ ನಿಗದಿತವಾಗಿದ್ದ ೭೮ ಡಾಲರ್ ಮೊತ್ತವನ್ನು ತೋರಿಸಿದ. ಅದು ಸರಿಯಾದ ಮೊತ್ತ.
ನನಗೆ ಆ ಕ್ಷಣದಲ್ಲಿ ನೆನಪಾದುದು ನಮ್ಮ ದೇಶದಲ್ಲಿನ ಚಾಲಕರು ಹೇಗೆ ವಿದೇಶಿಯರನ್ನು ಮೋಸಕ್ಕೆ ಒಳಪಡಿಸುತ್ತಾರೆಯೋ ಅದೇ ರೀತಿಯೇ ಇವನೂ ನನ್ನನ್ನು ಮೋಸ ಮಾಡಲು ಪ್ರಯತ್ನಿಸುತ್ತಿದ್ದಾನೆಂಬುದು.
ಆದರೇ ಇವರೀರ್ವರಲ್ಲಿ ಒಂದೇ ವ್ಯತ್ಯಾಸ. ನಮ್ಮ ದೇಶದ ಚಾಲಕರು ಅವರ ಅಂಗಳದಲ್ಲಿಯೇ ಮೋಸ ಮಾಡುತ್ತಾರೆ. ಆದರೆ ಈ ಮಹಾಶಯನದ್ದು ಬೇರಾವುದೋ ದೇಶಕ್ಕೆ ಹೊಟ್ಟೆಪಾಡಿಗೆಂದು ವಲಸೆ ಬಂದು, ಅಲ್ಲಿ ಮತ್ತೊಬ್ಬ ವಿದೇಶಿಯನ್ನು ಮೋಸ ಮಾಡಿ ಹೆಚ್ಚಿನ ಹಣ ಸಂಪಾದಿಸುವ ಪ್ರಯತ್ನ.
ಆಗ ನನಗನಿಸಿದ್ದು -
ಮೋಸ ಮಾಡುವ ಜನ ಎಲ್ಲ ಕಡೆಯೂ ಇರುತ್ತಾರೆ. ಅಮೇರಿಕ ಇದಕ್ಕೇನೂ ಹೊರತಲ್ಲ. ಇಲ್ಲಿಯೂ ಅವಕಾಶ ಸಿಕ್ಕಾಗ ಕುತ್ತಿಗೆಯನ್ನು ಕುಯ್ದು ಹಣ ಸುಲಿಗೆ ಮಾಡುವುದು ಸರ್ವೇ ಸಾಮಾನ್ಯ.
ಅವನಿಗೆರಡು ಬುದ್ಧಿ ಮಾತುಗಳನ್ನಾಡಿ ನಾನು ಹೋಟೆಲ್ ನೊಳಕ್ಕೆ ಕಾಲಿಟ್ಟೆ.

Saturday 10 March, 2007

ಬೆಳದಿಂಗಳ ಬಾಲೆ

ಮುಂಜಾನೆಯಾಗುವ ಮುನ್ನವೇ
ಹಾಲಿನಂಥ ಬೆಳದಿಂಗಳಲಿ
ಪರಕಾಲದ ನೆರಿಗೆಯನ್ನು ಮೇಲಕ್ಕೆ ಸಿಕ್ಕಿಸಿಕೊಂಡು
ಉದಯರಾಗ ಹಾಕುತ್ತಾ ರಂಗೋಲಿ ಹಾಕುವಾ ಬಾಲೆ
-- ಬೆಳದಿಂಗಳ ಬಾಲೆ

Sunday 4 March, 2007

ಆರಂಭ - A beginning

ಬಹಳ ದಿನಗಳ ಬಯಕೆ - ಬರೆಯುವುದನ್ನು ಹವ್ಯಾಸವಾಗಿ ರೂಢಿಸಿಕೊಳ್ಳಬೇಕೆನ್ನುವುದು. ಎಲ್ಲರೂ ಹಾದು ಹೊಯ್ದ ಹಾದಿಯನ್ನೇ ನಾನೂ ಅನುಸರಿಸಿದೆ. ಆಂಗ್ಲ ಭಾಷೆಯಲ್ಲಿ blog ಆರಂಭಿಸಿದೆ. ಒಂದಿಷ್ಟು ಬಾರಿ ಬರೆದಿದ್ದೂ ಉಂಟು. ಆದರೆ ಎಲ್ಲೋ ಮನಸ್ಸಿನಾಳದಲ್ಲಿ ಒಂದು ಬಯಕೆ. ಕನ್ನಡದಲ್ಲಿ ಯೋಚನೆ ಮಾಡುವಾಗ, ಅದನ್ನು ಕನ್ನಡದಲ್ಲಿಯೇ ಪ್ರಕಟಿಸಬೇಕೆನ್ನುವುದು.
ಸರಿ, ಮನಸ್ಸಿನ ಬಯಕೆಯನ್ನು ಅಸ್ತಿತ್ವಕ್ಕೆ ತರಲು ಸಕಲ ಸಿದ್ಧತೆಗಳು ಬೇಕಲ್ಲವೇ? ಅಂತಹುದರಲ್ಲಿ ಮೊದಲನೆಯದು ನಾಮಧೇಯ. ಇದಕ್ಕೆಂದೇ ಬಹಳ ದಿನಗಳು ತಲೆ ಕೆಡಿಸಿಕೊಂಡೆ. ಕೆಲವು ಹೆಸರುಗಳು ಹೊಳೆದಿದ್ದೂ ಉಂಟು - ದುಂದುಭಿ, ತುಂತುರು, ಇಂಚರ ಮುಂತಾದವು. ನಾನು ಈ ಹೆಸರುಗಳನ್ನು ನೊಂದಾಯಿಸುವಷ್ಟರಲ್ಲಿ ಬೇರೆಯವರು ನೊಂದಣಿ ಮಾಡಿದ್ದುದು ಕಂಡು ಬಂದಿತು.
ಕಡೆಗೆ, ಮನಸ್ಸಿಗೆ ಗೋಚರವಾದ ಹೆಸರು - ಪ್ರಸ್ತಾಪ. ಸೂಕ್ತವಾದ ಶೀರ್ಷಿಕೆ ಅನ್ನಿಸಿತು. ಮನಸ್ಸಿನಾಳದ ದನಿಯೊಂದಿಗಿನ ಪ್ರಸ್ತಾಪಗಳು ಹೊರಹೊಮ್ಮಿದಾಗ ಮೂಡುವುದೇ ಈ -

ಪ್ರಸ್ತಾಪ