Friday 26 September, 2008

ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸ ಭೃಂಗದ ಬೆನ್ನೇರಿ

ಇದು ದ. ರಾ. ಬೇಂದ್ರೆಯವರ ಒಂದು ಕವನದ ಸಾಲು. ಸಂಪೂರ್ಣ ಕವನದ ಕೊಂಡಿ ಇಲ್ಲಿದೆ.
ದೂರದರ್ಶನದಲ್ಲಿ ಕಂಡು ಕೇಳಿದ ಒಂದು ಸಂಕ್ಷಿಪ್ತ ಪಕ್ಷಿನೋಟ:

ಬದುಕಿನ ಪೂರ್ತಿ ಗೋಳು, ಕಷ್ಟ-ಕಾರ್ಪಣ್ಯಗಳು ತುಂಬಿರತ್ತೆ. ಆಗಲೋ ಈಗಲೋ ಮಧ್ಯದಲ್ಲಿ ಒಂದೆರಡು ಕ್ಷಣಗಳಲ್ಲಿ ನಲಿವು ಹೊರಹೊಮ್ಮುತ್ತೆ. ಆ ಹೊರಹೊಮ್ಮಿದ ನಲಿವು ಮಂದಹಾಸಕ್ಕೆ ಕಾರಣವಾಗುತ್ತೆ. ಎಲ್ಲಕ್ಕಿಂತ ಮಿಗಿಲಾಗಿ, ಆ ಮಂದಹಾಸ ಮರೀಚಿಕೆಯಂತೆ. ಅದನ್ನು ಹುಡುಕಿ ಹೋದರೇ ಸಿಗದು. ತಾನಾಗೇ ನಮ್ಮನ್ನು ಅರಸಿ ಬರಬೇಕು.

Sunday 3 February, 2008

ಹೃದಯ ಚಿರಂಜೀವಿಯಾದಾಗ...

ಈಗ್ಗೆ ಸುಮಾರು ಒಂದೆರಡು ವಾರಗಳ ಹಿಂದೆ ಪತ್ರಿಕೆಗಳಲ್ಲಿ ಕಂಡುಬಂದ ವಿಷಯ: ಸಾವನ್ನಪ್ಪಿದ ಹೃದಯದ ಪುನರುತ್ಥಾನ.
ಇದರ ಕೊಂಡಿ ಇಲ್ಲಿದೆ .
ಕುತೂಹಲಕಾರಿಯಾದಂತಹ ವಿಷಯವಾದ್ದರಿಂದ ಓದಲಾರಂಭಿಸಿದೆ. ಪ್ರಯೋಗಕ್ಕಾಗಿ ಬಳಸಲಾಗಿದ್ದ ಮೂಷಿಕಗಳನ್ನು ಸಾಯಿಸಿ, ಅವುಗಳ ಹೃದಯದ ಒಳ ಖಂಡಗಳನ್ನು ಬಿಸಾಡಿ, ಹೊರಗಿನ ಕವಚಕ್ಕೆ ನವಜಾತ ಮೂಷಿಕಗಳ ಹೃದಯದ ಜೀವಕೋಶಗಳಿಂದ ತುಂಬಿಸಿ ವೀಕ್ಷಣೆಯಲ್ಲಿ ಇಟ್ಟರಂತೆ. ಕೆಲವೇ ದಿನಗಳಲ್ಲಿ ಆ ಜೀವಕೋಶಗಳು ಬೆಳೆದು ಹೆಚ್ಚಾಗಿ ಹೃದಯಕ್ಕೆ ಜೀವ ತುಂಬಿ ಮಿಡಿಯಲಾರಂಭಿಸಿದವಂತೆ. ಇದು ಪ್ರಕೃತಿಯ ವಿಸ್ಮಯವಲ್ಲದೇ ಮತ್ತೇನು?
ಈ ಪ್ರಯೋಗವನ್ನೀಗ ವರಾಹಗಳಲ್ಲೂ ಸಫಲವಾಗಿ ಪರೀಕ್ಷಿಸಲಾಗಿದೆಯಂತೆ. ಇಷ್ಟೆಲ್ಲ ಆದಮೇಲೆ ಅವರು ಸಾರ್ವಜನಿಕವಾಗಿ ಇದರ ಘೋಷಸಿದ್ದು. ವೈದ್ಯರು ಈಗ ಇದನ್ನು ಮನುಷ್ಯರಲ್ಲೂ ಪರೀಕ್ಷಿಸಲು ಆಲೋಚಿಸುತ್ತಿದ್ದಾರೆ ಅಂತ ಸುದ್ದಿ. ಇದರ ಪರಿಣಾಮಗಳ ಬಗ್ಗೆ ಯೋಚನೆ ಮಾಡಿದೆ.
೧. ಇದೇ ಮಾರ್ಗೋಪಾಯಗಳನ್ನು ಬಳಸಿಕೊಂಡು ಈಗ ಮನುಷ್ಯನ ದೇಹದಲ್ಲಿರುವ ಬೇರೆ ಬೇರೆ ಅಂಗಾಂಗಳನ್ನೂ ಪುನಶ್ಚೇತನಗೊಳಿಸಬಹುದಲ್ಲವೇ? ಉದಾಹರಣೆಗೆ ಹೃದಯವಲ್ಲದೇ ಪಿತ್ತಕೋಶವಾಗಲಿ, ಶ್ವಾಸಕೋಶವಾಗಲಿ ರೆಪೇರಿ ಮಾಡಬಹುದು ಅಂತಾಯ್ತಲ್ವಾ? ಕಾಮಾಲೆ ಖಾಯಿಲೆ ಬಂದು ಪಿತ್ತಕೋಶ ಸಂಪೂರ್ಣವಾಗಿ ಹಾಳಾದ ಪರಿಸ್ಥಿತಿಯಲ್ಲಿ ಈ ಉಪಾಯ ಸಮಯೋಚಿತ. ಇದೆಲ್ಲ ಒಳ್ಳೆಯದೇ. ಮನುಕುಲದ ಉದ್ಧಾರಕ್ಕೆಂದು ಬಳಸಿದರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಯೋಚನೆ ಮಾಡಿ. ಮನುಷ್ಯನಿಗಿರುವ ಮನಸ್ಸು ಮರ್ಕಟದಂತೆ. ಕೂದಲು ಬೆಳ್ಳಗಾಯಿತು ಅನ್ನೋ ಪಿಳ್ಳೆ ನೆವದಿಂದಲೇ ತಲೆ ಕೆಡಿಸಿಕೊಂಡು ಅದಕ್ಕೆ ಬಣ್ಣ ಹಚ್ಚಿ ಯೌವನವನ್ನ ಮೆರೀತಾನೆ. ತಾನು ಅಜರಾಮರವಾಗಬೇಕೆಂಬ ಹೆಬ್ಬಯಕೆ ಆತನದು. ಈ ಪ್ರಯೋಗ ಅವನ ಮನಸ್ಸಿನಲ್ಲಿ ದುರಾಲೋಚನೆಗಳನ್ನು ತುಂಬುವುದಿಲ್ಲವೇ? ನಾನೇಕೆ ನನ್ನ ಹೃದಯವನ್ನು ರೆಪೇರಿ ಮಾಡಿಕೊಂಡು ಮತ್ತೆ ೨೦ - ೩೦ ಸಂವತ್ಸರಗಳು ಬದುಕಬಾರದು ಅನ್ನೋ ಯೋಚನೆ ಬರೋದಿಲ್ಲವೇ? ಶಾಪಗ್ರಸ್ಥ ಯಯಾತಿ ತನ್ನ ವ್ರುದ್ಧಾಪ್ಯವನ್ನು ತನ್ನ ಮಗನಿಗೆ ಕೊಟ್ಟು ಅವನ ಯೌವನವನ್ನು ತಾನು ಅನುಭವಿಸಿದ ಕಥೆ ನಮ್ಮೆಲ್ಲರಿಗೂ ಚಿರಪರಿಚಿತ. ಈಗಿನ ಮಾನವ ಯಯಾತಿಯಂತೆ ಆಗುವುದಿಲ್ಲವೆಂಬ ಖಾತ್ರಿಯಾದರೂ ಏನು?
೨. ಸ್ವಾರಸ್ಯಕರವೆಂಬಂತೆ ಒನ್ನೊಂದು ವಿಷಯ ಹೊಳೆಯಿತು. ಮನುಷ್ಯನಲ್ಲಿ ಇಂತಹ ಪುನರ್ಜೀವ ಪಡೆಯುವ ಶಕ್ತಿ ಬಂದಾಗ ಅವನ ಜಾತಕವೂ ಬದಲಾಗುತ್ತದೆಯೋ ಹೇಗೆ? ಎಂದೋ ಮೊದಲ ಬಾರಿ ಹುಟ್ಟಿದ ದಿನ, ನಕ್ಷತ್ರಗಳಿಗನುಸಾರವಾಗಿ ಅವನ ಭಾಗ್ಯ, ಕರ್ಮ, ಪ್ರಾರಬ್ಧ ಮೋಕ್ಷಗಳನ್ನು ಕೊಂಡು ಬಂದಿರುತ್ತಾನಲ್ಲವೇ? ಹೀಗೆ ಪುನರ್ಜನ್ಮ ಪಡೆದ ನಂತರ ಅವನ ಪ್ರಾರಬ್ಧವಾಗಲಿ ಅವನ ಕರ್ಮವಾಗಲಿ ಬದಲಾಗುತ್ತದೆಯೋ? ನನಗಂತೂ ಇದರ ಉತ್ತರ ತಿಳಿದಿಲ್ಲ. ಓದುಗರಿಗೆ ತಿಳಿದಿದ್ದಲ್ಲಿ ನನಗೂ ಸ್ವಲ್ಪ ತಿಳಿಹೇಳಿ.